ಹೊಸಪೇಟೆ
	ಭಾರತದ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕಿನ ಪ್ರದೇಶ ಎರಡು ಭಾಗಗಳಲ್ಲಿ ಸೇರಿದೆ. ಹೆಚ್ಚು ವಿಶಾಲವಾಗಿರುವ ಈ ತಾಲ್ಲೂಕು ಪ್ರದೇಶವನ್ನು ಈಶಾನ್ಯದಲ್ಲಿ ಸಿರಗುಪ್ಪ, ಪೂರ್ವದಲ್ಲಿ ಬಳ್ಳಾರಿ, ದಕ್ಷಿಣದಲ್ಲಿ ಸೊಂಡೂರು ತಾಲ್ಲೂಕುಗಳೂ ಪಶ್ಚಿಮದಲ್ಲಿ ಹಗರಿಬೊಮ್ಮನಹಳ್ಳಿ, ವಾಯವ್ಯ ಮತ್ತು ಉತ್ತರದಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕುಗಳೂ ಸುತ್ತುವರಿದಿವೆ. ಈ ಪ್ರದೇಶದ ನೈಋತ್ಯಕ್ಕಿರುವ ಹೊಸಪೇಟೆ ತಾಲ್ಲೂಕಿನ ಮತ್ತೊಂದು ಭಾಗವನ್ನು ಅದರ ಪೂರ್ವದಲ್ಲಿ ಸೊಂಡೂರು, ದಕ್ಷಿಣದಲ್ಲಿ ಕೂಡ್ಲಿಗಿ, ಪಶ್ಚಿಮದಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕುಗಳು ಸುತ್ತುವರಿದಿವೆ. ಕಮಲಾಪುರ, ಮರಿಯಮ್ಮನಹಳ್ಳಿ, ಹೊಸಪೇಟೆ ಮತ್ತು ಕಂಪ್ಲಿ ಹೋಬಳಿಗಳು. ಒಟ್ಟು 74 ಗ್ರಾಮಗಳಿವೆ. ವಿಸ್ತೀರ್ಣ 894.8 ಚ.ಕಿಮೀ. ಜನಸಂಖ್ಯೆ 3,73,665.

	ತಾಲ್ಲೂಕಿನಲ್ಲಿ ಸಣ್ಣ ಬೆಟ್ಟಗುಡ್ಡಗಳಿವೆ. ಇವುಗಳಲ್ಲಿ ಕಂಪ್ಲಿ ಬೆಟ್ಟಸಾಲಿನ ತಿಮ್ಮಾಪುರ ಬೆಟ್ಟ (2,133) ಹೆಚ್ಚು ಎತ್ತರವಾದದ್ದು. ತುಂಗಭದ್ರಾ (ನೋಡಿ- ತುಂಗಭದ್ರಾ) ಈ ತಾಲ್ಲೂಕಿನ ಮುಖ್ಯನದಿ. ತಾಲ್ಲೂಕಿನ ಉತ್ತರದ ಗಡಿಯಾಗಿ ಈಶಾನ್ಯಾಭಿಮುಖವಾಗಿ ಹರಿಯುವ ಈ ನದಿ ಕೊಪ್ಪಳ ಜಿಲ್ಲೆಯ ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕುಗಳಿಂದ ಇದನ್ನು ವಿಂಗಡಿಸಿದೆ. ಜೊತೆಗೆ ತುಂಗಭದ್ರಾ ಜಲಾಶಯದ ಕಾಲುವೆಗಳ ಜಾಲ ಈ ತಾಲ್ಲೂಕಿನಲ್ಲಿ ಹರಡಿದ್ದು ವ್ಯವಸಾಯಕ್ಕೆ ಹೆಚ್ಚು ಅನುಕೂಲವಿದೆ. ತಾಲ್ಲೂಕಿನಲ್ಲಿ ಸುಮಾರು 27,864 ಹೆಕ್ಟೇರ್ ಮೀಸಲು ಅರಣ್ಯಪ್ರದೇಶವಿದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 684.83 ಮಿಮೀ.

	ಈ ತಾಲ್ಲೂಕಿನಲ್ಲಿರುವ ಕಪ್ಪುಜೇಡಿ, ಕೆಂಪುಜೇಡಿ ಮತ್ತು ಮರಳು ಮಿಶ್ರಿತ ಭೂಪ್ರದೇಶ ತುಂಗಭದ್ರಾ ನಾಲಾ ನೀರಿನ ಆಶ್ರಯ ಪಡೆದಿವೆ. ಜೊತೆಗೆ ತಾಲ್ಲೂಕಿನಲ್ಲಿ ದಣ್ಣಾಯಕನ ಕೆರೆ, ಕಮಲಾಪುರ ಕೆರೆ ಮುಂತಾದ ಕೆರೆ ಬಾವಿಗಳೂ ಇವೆ. ನೀರಾವರಿಗಾಗಿಯೇ ಕಟ್ಟಿದ ಸಣ್ಣ ಒಡ್ಡುಗಳೂ ಕಟ್ಟೆಗಳೂ ತಾಲ್ಲೂಕಿನಲ್ಲಿವೆ. ಜೋಳ, ಬತ್ತ, ಕಬ್ಬು, ಸೇಂಗಾ, ಹತ್ತಿ ಮುಂತಾದವನ್ನು ಬೆಳೆಯುತ್ತಾರೆ. ಪಶುಪಾಲನೆ ಮತ್ತು ಮತ್ಸ್ಯೋದ್ಯಮ ಗಳು ವಿಸ್ತರಿಸುತ್ತಿವೆ. ಕಂಪ್ಲಿಯಲ್ಲಿ ಒಂದು ವ್ಯವಸಾಯ ತರಬೇತಿ ಶಾಲೆ ಇದೆ.

	ಈ ತಾಲ್ಲೂಕಿನಲ್ಲಿ ಮ್ಯಾಂಗನೀಸ್ ಮತ್ತು ಸೀಸದ ಅದುರು ದೊರೆಯುತ್ತದೆ. ಕಬ್ಬು ಹೆಚ್ಚು ಬೆಳೆಯುವ ಈ ಪ್ರದೇಶದಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿವೆ. ಈ ತಾಲ್ಲೂಕಿನ ಕಂಪ್ಲಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲೇ ಪ್ರಥಮವಾಗಿ ಸಹಕಾರಿ ವ್ಯವಸ್ಥೆಯಿಂದ ಸ್ಥಾಪನೆಯಾದದ್ದು. ತಾಲ್ಲೂಕಿನಲ್ಲಿ ಸ್ಪಿರಿಟ್ ಮತ್ತು ಪಾನೀಯಗಳನ್ನು ತಯಾರಿಸುವ ಕಾರ್ಖಾನೆಯಿದೆ. ತುಂಗಭದ್ರಾ ಉಕ್ಕಿನ ಉತ್ಪನ್ನಗಳ ಕಾರ್ಯಾಗಾರವಿದೆ. ಎರಡು ರಾಸಾಯನಿಕ ಉದ್ಯಮಗಳಿವೆ. ತಾಲ್ಲೂಕಿನಲ್ಲಿ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳು ಸುತ್ತಲ ಊರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಿವೆ. ಬೆಂಗಳೂರು-ಬಳ್ಳಾರಿ-ಹೊಸಪೇಟೆ-ಗದಗ-ಹುಬ್ಬಳ್ಳಿ, ಹೊಸಪೇಟೆ-ಕೊಟ್ಟೂರು ರೈಲುಮಾರ್ಗವಿದ್ದು ಈ ತಾಲ್ಲೂಕಿನ ಕೈಗಾರಿಕಾಭಿವೃದ್ಧಿಗೆ ಸಹಾಯಕವಾಗಿದೆ. ಹೊಸಪೇಟೆಯ ಪಶ್ಚಿಮಕ್ಕೆ ಸು. 2 ಕಿಮೀ ದೂರದಲ್ಲಿರುವ ಅಮರಾವತಿಯಲ್ಲಿ ತುಂಗಭದ್ರಾ ಯೋಜನೆಯ ಅನೇಕ ಸರ್ಕಾರಿ ಕಚೇರಿಗಳಿವೆ. ಹೊಸಪೇಟೆಗೆ ಈಶಾನ್ಯದಲ್ಲಿ 13 ಕಿಮೀ ದೂರದಲ್ಲಿರುವ ಹಂಪೆ (ನೋಡಿ- ಹಂಪೆ) ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದು ಪ್ರಸಿದ್ಧ ಐತಿಹಾಸಿಕ ಸ್ಥಳ. ಇಲ್ಲಿ ಅನೇಕ ದೇವಾಲಯಗಳೂ ಐತಿಹಾಸಿಕ ಅವಶೇಷಗಳು ಇವೆ. ಹೊಸಪೇಟೆಯ ಈಶಾನ್ಯಕ್ಕೆ 11 ಕಿಮೀ ದೂರದಲ್ಲಿರುವ ಕಮಲಾಪುರ ಹಿಂದೆ ಆನೆಗೊಂದಿ ರಾಜರ ವಾಸಸ್ಥಾನವಾಗಿತ್ತು. ಇಲ್ಲಿ ಒಂದು ಹಳೆಯ ಕೋಟೆಯಿದೆ. ಹೊಸಪೇಟೆಯ ಈಶಾನ್ಯಕ್ಕೆ 32 ಕಿಮೀ ದೂರದಲ್ಲಿರುವ ಕಂಪ್ಲಿ ಒಂದು ಇತಿಹಾಸಪ್ರಸಿದ್ಧ ಸ್ಥಳ. ಹೊಸಪೇಟೆಯ ದಕ್ಷಿಣಕ್ಕೆ 29 ಕಿಮೀ ದೂರದಲ್ಲಿರುವ ತಿಮ್ಮಲಾಪುರದಲ್ಲಿ ಹಳೆಯ ಕೋಟೆ ಅವಶೇಷವಿದೆ. ಇಲ್ಲಿ 1539ರಲ್ಲಿ ಕಟ್ಟಿದ ಗೋಪಾಲಕೃಷ್ಣ ದೇವಾಲಯವಿದೆ.

	ಹೊಸಪೇಟೆ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬಳ್ಳಾರಿಯ ವಾಯವ್ಯಕ್ಕೆ 65 ಕಿಮೀ ದೂರದಲ್ಲಿದೆ. ಜನಸಂಖ್ಯೆ 2,20,481. ತಾಲ್ಲೂಕಿನ ಮುಖ್ಯ ವ್ಯಾಪಾರ, ವಾಣಿಜ್ಯ, ಕೈಗಾರಿಕೆ ಮತ್ತು ಶಿಕ್ಷಣ ಕೇಂದ್ರ. ಕೈಗಾರಿಕಾ ನಗರವಾದ ಹೊಸಪೇಟೆಯ ವಿಸ್ತರಣೆ ಯೋಜನಾಬದ್ಧ ವಾಗಿದೆ. ಇಲ್ಲಿ ಸಕ್ಕರೆ ಕಾರ್ಖಾನೆ, ತುಂಗಭದ್ರಾ ಉಕ್ಕು ಉಪಕರಣಗಳ ಕಾರ್ಖಾನೆ ಇವೆ. ಗಣಿ ಉದ್ಯಮಿಗಳ ಮತ್ತು ಮಾಲಿಕರ ಸಂಘವೂ ಹೊಸಪೇಟೆ ವಾಣಿಜ್ಯ ಮಂಡಳಿಯೂ ಇವೆ. ಈ ಪಟ್ಟಣಕ್ಕೆ 1935ರಿಂದಲೇ ವಿದ್ಯುತ್ ಸೌಕರ್ಯವಿದೆ. ಸುತ್ತಲ ಐತಿಹಾಸಿಕ ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರು ಹೊಸಪೇಟೆಯನ್ನು ತಂಗುವ ಕೇಂದ್ರವನ್ನಾಗಿ ಮಾಡಿಕೊಳ್ಳುವುದರಿಂದ ಇದೊಂದು ಪ್ರವಾಸಿ ಕೇಂದ್ರವಾಗಿದೆ. ಇದೊಂದು ಪ್ರಮುಖ ರೈಲುನಿಲ್ದಾಣ. ಉತ್ತಮ ಮಾರ್ಗಗಳಿವೆ. ಇದರ ಹತ್ತಿರದ ತುಂಗಭದ್ರಾ ಅಣೆಕಟ್ಟಿನಿಂದ 12 ಕಿಮೀ ದೂರದಲ್ಲಿ ವಿಮಾನ ನಿಲ್ದಾಣವಿದೆ.

	ವಿಜಯನಗರದ ಕೃಷ್ಣದೇವರಾಯ ತನ್ನ ಹೆಂಡತಿ ನಾಗಲದೇವಿಯ ನೆನಪಿಗಾಗಿ ಈ ನಗರವನ್ನು 1509 ಮತ್ತು 1520ರ ಮಧ್ಯದಲ್ಲಿ ಕಟ್ಟಿ ನಾಗಲಾಪುರವೆಂದು ಹೆಸರಿಟ್ಟ. ತನ್ನ ಹೆಚ್ಚು ವೇಳೆಯನ್ನು ಇಲ್ಲಿ ಕಳೆಯುತ್ತಿದ್ದ. ಗೋವ ಮತ್ತು ಪಶ್ಚಿಮದ ಕಡೆಯಿಂದ ಬರುತ್ತಿದ್ದ ಪ್ರವಾಸಿಗಳೂ ವ್ಯಾಪಾರಿಗಳೂ ಈ ನಗರದ ಮೂಲಕವೇ ವಿಜಯನಗರ ವನ್ನು ಪ್ರವೇಶಿಸಬೇಕಾಗಿತ್ತು. ಕಮಲಾಪುರ ಆಗ ವಿಜಯನಗರದ ಪಶ್ಚಿಮದ ಹೆಬ್ಬಾಗಿಲಿನಂತಿತ್ತು. ಟಿಪ್ಪುಸುಲ್ತಾನ್ ನೇಮಿಸಿದ ಸುಬೇದಾರ್ ಗಫೂರ್‍ಖಾನ್ 1785-86ರಲ್ಲಿ ಇಲ್ಲಿ ಒಂದು ಮಸೀದಿಯನ್ನೂ ಬಾವಿಯನ್ನೂ ಕಟ್ಟಿಸಿದ್ದ. ಆ ಬಾವಿಯನ್ನು ಈಗಲೂ ಸುಬೇದಾರ್ ಬಾವಿ ಎಂದು ಕರೆಯುತ್ತಾರೆ. 1934ರಲ್ಲಿ ಹೊಸಪೇಟೆಗೆ ಗಾಂಧೀಜಿ ಭೇಟಿ ಕೊಟ್ಟಿದ್ದರು.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
						